ಕಣೆ ರೋಗದ ನೊಣ : ಬತ್ತದ ಪೈರಿಗೆ ಬರುವ ಕಣೆ, ಆನೆಕೊಂಬು ಅಥವಾ ಕೊಳವೆ ರೋಗಕ್ಕೆ ಕಾರಣವಾದ ಡಿಪ್ಟಿ ಗಣದ ಸೆಸಿಡೋಮೈಡಿ ಕುಟುಂಬಕ್ಕೆ ಸೇರಿದ ಪ್ಯಾಕಿಡಿಪ್ಲಾಸಿಸ್ ಒರೈಜೆó ಎಂಬ ನೊಣ. ಇದು ಸೊಳ್ಳೆಯಂತೆ ಉದ್ದನೆಯ ಕಾಲುಗಳುಳ್ಳ ಸೂಕ್ಷ್ಮವಾದ ಕೀಟ.
ಹೆಣ್ಣು ನೊಣ ಬತ್ತದ ಪೈರಿನ ಚಿಗುರು ಭಾಗಗಳ ಮೇಲೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯೊಡೆದು ಬರುವ ಕಾಲಿಲ್ಲದ ಬಿಳಿಬಣ್ಣದ ಮರಿಹುಳುಗಳು (ಮ್ಯಾಗಟ್) ಎಳೆಯ ಕಾಂಡವನ್ನು ಕೊರೆದು ಒಳಗೆ ಪ್ರವೇಶಿಸುತ್ತವೆ. ಇದರಿಂದ ಪ್ರಚೋದನೆಗೊಂಡ ಕಾಂಡದಿಂದ ತಿಳಿ ಬಿಳುಪು ಅಥವಾ ನಸು ನೀಲಿಬಣ್ಣದ ಟೊಳ್ಳು ಕೊಳವೆಗಳು ಉತ್ಪತ್ತಿಯಾಗುತ್ತವೆ. ಇವುಗಳನ್ನೇ ಬೆಳ್ಳಿ ಕೊಳವೆ (ಸಿಲ್ವರ್ ಶುಟ್) ಅಥವಾ ಆನೆಕೊಂಬು ಎಂದು ಕರೆಯುವುದು. ಹುಳು ಹತ್ತಿದ ಗಿಡಗಳಲ್ಲಿ ತೆನೆಯ ಉತ್ಪನ್ನವಿಲ್ಲ. ಕ್ರಮೇಣ ಕೊಳವೆಯೊಳಗೇ ಮರಿಹುಳುಗಳು ಕೋಶಾವಸ್ಥೆಗೆ ತಿರುಗಿ ಬಲಿತ ನೊಣವಾಗಿ ಹೊರಗೆ ಬರುತ್ತವೆ.

ಭಾರತದಲ್ಲಿ ಬತ್ತಕ್ಕೆ ಕಣೆಯ ಕಾಟ ಅತ್ಯಂತ ತೀವ್ರರೂಪದ್ದು; ಆಂಧ್ರಪ್ರದೇಶ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮೈಸೂರು, ಒರಿಸ್ಸ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇದರ ಹಾವಳಿ ಹೆಚ್ಚಾಗಿರುವುದು ಕಂಡುಬಂದಿದೆ. ಚಕ್ರಗತಿಯನ್ನನುಸರಿಸಿ ಒದಗುವ ಈ ಮಾರಿ ಸಾಂಕ್ರಾಮಿಕದಂತೆ ಬಹಳ ಬೇಗ ಹರಡುವುದು. ಸ್ಥಳೀಕವಾಗಿ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಇದರಿಂದ ತೀವ್ರ ರೂಪದ ನಷ್ಟವುಂಟಾಗಿ ಶೇ. 50ಕ್ಕೂ ಮೀರಿದಷ್ಟು ಬೆಳೆ ಹಾಳಾಗಿ ಹೋಗಬಹುದು. ಮರಿಹುಳುವಿನ ಅವಧಿ 8-18 ದಿನಗಳು ಮತ್ತು ಕೋಶಾವಸ್ಥೆಯ ಕಾಲ 2-6 ದಿನಗಳು. ಜೀವಮಾನದ ಒಟ್ಟು ಅವಧಿ 2-3 ವಾರ. ವರ್ಷದಲ್ಲಿ 5 ರಿಂದ 8 ಸಂತತಿಗಳು. ಚಳಿಗಾಲವನ್ನು ಮರಿಹುಳು ಬತ್ತದಕೂಳು ಅಥವಾ ಅಕ್ಕಪಕ್ಕದ ಕಾಡುಹುಲ್ಲುಗಳಲ್ಲಿ ಕಳೆಯುವುದು.	(ಡಿ.ಎಸ್.; ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ